ಪಾಮಿರ್
ಮಧ್ಯ ಏಷ್ಯಾದ ಎತ್ತರವಾದ ಪರ್ವತಪ್ರದೇಶ. ಮುಖ್ಯವಾಗಿ ಸೋವಿಯತ್ ದೇಶದ ತಾಜಿಕ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಗಾರ್ನೋ-ಬಾದಾಕ್ಷಾನ್ ಸ್ವಯಮಾಡಳಿತ ಪ್ರಾಂತ್ಯಕ್ಕೆ ಸೇರಿದೆ. ಅದನ್ನು ಸುತ್ತುಗಟ್ಟಿರುವ ಪರ್ವತ ವ್ಯವಸ್ಥೆಗಳು ಮಧ್ಯ ಏಷ್ಯಾದ ಹಿಂದೂಕುಷ್, ಕೂನ್‍ಲೂನ್ದ್ ಗಿಸ್ಸಾರ್ ಆಲೈ ಮತ್ತು ಟೀಯೆನ್‍ಷಾನ್. ಈ ಉನ್ನತ ಪ್ರದೇಶದ ಉದ್ದ, ಸುಮಾರು 448 ಕಿಮೀ, ಅಗಲ 192-240 ಕಿಮೀ. ಇದರ ಉತ್ತರದಲ್ಲಿ ಆಲೈ ಪರ್ವತಶ್ರೇಣಿ. ಪೂರ್ವದಲ್ಲಿ ಚೀನಾ ಮತ್ತು ಸೋವಿಯತ್ ದೇಶಗಳ ಗಡಿಯಲ್ಲಿರುವ ಸಾರಿಕಾಲ್, ದಕ್ಷಿಣದಲ್ಲಿರುವ eóÁರ್ಕೂಲ್ ಸರೋವರ, ಪಾಮಿರ್ ನದಿ ಮತ್ತು ಪ್ಯಾನµóï ನದಿಯ ಉಗಮ ಸ್ಥಳ, ಪಶ್ಚಿಮದಲ್ಲಿ ಪ್ಯಾನµóï ಕಣಿವೆಯ ದಕ್ಷಿಣೋತ್ತರ ಭಾಗ ಇದೆ. ಪೀಟರ್ 1 ಮತ್ತು ದರ್ವಾಜ್ ಶ್ರೇಣಿಗಳು ಈ ಪರ್ವತ ಪ್ರದೇಶಕ್ಕೆ ಸೇರಿವೆ. ಏಕೆಂದರೆ ಇವುಗಳ ಹಿಮನದಿಗಳು ಪಾಮೀರ್‍ನ ವಾಯುವ್ಯಭಾಗದ ಹಿಮನದಿಗಳು ಒಂದೇ ವ್ಯವಸ್ಥೆಗೆ ಒಳಪಡುವಂಥವು.

ಪಾಮಿರ್ ಪರ್ವತ ಪ್ರದೇಶವನ್ನು ಅದರ ಮೇಲ್ಮೈಲಕ್ಷಣಕ್ಕನುಸಾರವಾಗಿ ಪಶ್ಚಿಮ ಪಾಮಿರ್ ಮತ್ತು ಪೂರ್ವ ಪಾಮಿರ್ ಎಂದು ವಿಭಜಿಸಬಹುದು. ಪಶ್ಚಿಮ ಪಾಮಿರ್‍ನಲ್ಲಿ ಎತ್ತರವಾದ ಪರ್ವತಗಳು, ಮಂಜು ಕವಿದ ಶಿಖರಗಳು ಮತ್ತು ಹಿಮ ನದಿಗಳು ಇವೆ. ಇಲ್ಲಿಯ ಬೃಹತ್ ಪರ್ವತಗಳ ನಡುನಡುವೆ ಕಿರುಬೆಟ್ಟಗಳುಂಟು. ಆಳವಾದ ಕಮರಿಯಲ್ಲಿ ವೇಗವಾಗಿ ಹರಿಯುವ ನದಿಗಳು ಇವೆ. ಪಾಮಿರ್ ಉನ್ನತ ಪ್ರದೇಶ ಹಿಂದೆ ಕಡಿದಾದ ನದೀ ಪ್ರಪಾತಗಳಾಗಿತ್ತು; ಇದು ಕಾಲಗತಿಯಲ್ಲಿ ಬೆಟ್ಟಗಳಿಂದ ಬಿದ್ದ ಬಂಡೆ ಮತ್ತು ಭೂಗಷ್ಟಿನಿಂದ ತುಂಬಿಹೋಗಿ ಎತ್ತರವಾದ ಪ್ರದೇಶವಾಯಿತು- ಎಂಬ ಅಭಿಪ್ರಾಯವನ್ನು ಫ್ರಾನ್ಸಿಸ್ ಯಂಗ್‍ಹಸ್ಬೆಂಡ್ ನೀಡಿದ್ದಾರೆ. ಪಾಮಿರ್ ಪ್ರದೇಶದ ಅತ್ಯಂತ ಎತ್ತರವಾದ ಭಾಗವನ್ನು ಕೂನ್‍ಲೂನ್ ಪರ್ವತದ ಕಡೆಯಿಂದ ಮುಟ್ಟಬಹುದು. ಮೂಸ್ಟಾ ಆಟಾ ಮತ್ತು ಟೀಯೆನ್ ಷಾನ್ ಪರ್ವತಗಳ ನಡುವಣ ಪ್ರದೇಶದ ಎತ್ತರ, ಸಮುದ್ರ ಮಟ್ಟದಿಂದ 3,658 ಮೀ.

ಪಾಮಿರ್ ಪ್ರದೇಶದಲ್ಲಿ ಉತ್ತರದಲ್ಲಿ ಕಮ್ಯೂನಿಸಂ (7,495 ಮೀ) ಮತ್ತು ಲೆನಿನ್ (7,134 ಮೀ) ಶಿಖರಗಳಿವೆ. ಕಮ್ಯೂನಿಸಂ ಶಿಖರ ಸೋವಿಯತ್ ದೇಶದ ಅತ್ಯುನ್ನತ ಬಿಂದು. ಪೂರ್ವಭಾಗದಲ್ಲಿ ಮೂಸ್ಟಾ ಆಟಾ ಶಿಖರ. ಪಶ್ಚಿಮದ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಜûುಲೂಮಾರ್ಟ್ ಶಿಖರಗಳು ಅಷ್ಟು ಎತ್ತರವಾಗಿಲ್ಲ. ಪಾಮಿರ್ ಪರ್ವತ ಸಾಲುಗಳನ್ನು ದಾಟಿಹೋಗಲು ಹಲವು ಮಾರ್ಗಗಳಿವೆ. ಅವುಗಳ ಪೈಕಿ ಖರ್‍ಘೋಷ್ ಮುಖ್ಯವಾದ್ದು. ಪಾಮಿರ್ ಕಣಿವೆಯಲ್ಲಿ ಅನೇಕ ನದಿಗಳು ಎಲ್ಲ ದಿಕ್ಕುಗಳಲ್ಲಿ-ವಿಶೇಷವಾಗಿ ಪೂರ್ವ ಹಾಗೂ ಪಶ್ಚಿಮದ ಕಡೆ-ಹರಿಯುತ್ತವೆ. ಅವುಗಳಲ್ಲಿ ಮುಖ್ಯವಾದ್ದು ಆಮೂ ದಾರ್ಯ, ಇತರ ನದಿಗಳು ಮುರ್ಗಾಬ್, ಪ್ಯಾನµóï ಮತ್ತು ಪಾಮಿರ್. ದಾರೀಮ್ ನದಿ ಪೂರ್ವಾಭಿಮುಖವಾಗಿ ಚೀನದತ್ತ ಹರಿಯುತ್ತದೆ.

 	
ಪಾಮಿರ್ ಪ್ರದೇಶದಲ್ಲಿ 1,085 ಹಿಮನದಿಗಳಿವೆ. ಅಕಾಡೆಮಿ ಆಫ್ ಸೈನ್ಸಸ್, ಟ್ರಾನ್ಸ್ ಆಲೀ, ರುಷಾನ್, ಆಲೀಚೂರ್, ಪೀಟರ್ 1 ಮತ್ತು ಜûುಲುಮಾರ್ಟ್ ಪರ್ವತ ಶ್ರೇಣಿಗಳಲ್ಲಿ ಇವು ಹೆಚ್ಚು. ಫೆಡೆಚೆಂಕೊ ಹಿಮನದಿ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ ಹುಟ್ಟಿ ಹರಿಯುತ್ತದೆ (70 ಕಿಮೀ). ಗ್ರುಮ್ ಗ್ರಿಜ್‍ಹೆಮೆಲೊ, ಗರ್ಮೊ, ಸಗ್ರನ್, ಜಿಯೋಗ್ರಾಫಿಕ್ ಸೊಸೈಟಿ, ಸೌಕ್‍ದಾರಾ, ಕೊeóರ್Éನೆವ್‍ಸ್ಕಿ, ಅಕ್ಟೋಬರ್, ಲೆನಿನ್-ಇವು ಕೆಲವು ಹಿಮನದಿಗಳು. ಪಶ್ಚಿಮ ಪಾಮಿರ್ ಪ್ರದೇಶದಲ್ಲಿ ಹಿಮ ಕವಿದಿದೆ.

ಪಾಮಿರ್ ಪ್ರದೇಶದಲ್ಲಿ ಹಲವು ಸರೋವರಗಳಿವೆ. ಕಾರಕಲ್, ರಂಗಕಲ್, ಆಲೀಚೂರ್ ಷೋರ್‍ಕಲ್, ಯಾಷಿಲ್‍ಕಲ್, ಸಾರೆeóïಕಲ್- ಇವು ಕೆಲವು ಸರೋವರಗಳು. ಕಾರಕಲ್ ಉಪ್ಪು ನೀರಿನ ಸರೋವರ.

ವಾಯುಗುಣ : ಪಾಮಿರ್ ಪ್ರದೇಶದ್ದು ಸಾಮಾನ್ಯವಾಗಿ ಶುಷ್ಕ ಹಾಗೂ ಖಂಡಾಂತರ ವಾಯುಗುಣ. ಪಶ್ಚಿಮ ಪಾಮಿರ್ ಭಾಗದಲ್ಲಿ ವಾರ್ಷಿಕ ಸರಾಸರಿ ಮಳೆ 107 ಮಿಮೀ-254 ಮಿಮೀ. ಪೂರ್ವ ಭಾಗದಲ್ಲಿ 127 ಮಿಮೀ. ಸಮುದ್ರಮಟ್ಟಕ್ಕೆ ಅತ್ಯಂತ ಹೆಚ್ಚು ಎತ್ತರದಲ್ಲಿರುವ ಭಾಗಗಳಲ್ಲಿ ವಾರ್ಷಿಕ ಮಳೆ 813 ಮಿಮೀ-1016 ಮಿಮೀ. ಪಶ್ಚಿಮ ಪಾಮಿರ್‍ನಲ್ಲಿ 508 ಮೀ 711 ಮಿಮೀ ಹಿಮಪಾತವಾಗುತ್ತದೆ; ಪೂರ್ವಭಾಗದಲ್ಲಿ 38 ಮಿಮೀ-101 ಮಿಮೀ.

ಪೂರ್ವಪಾಮಿರ್‍ನಲ್ಲಿ ಸಮುದ್ರಮಟ್ಟದಿಂದ 3,500 ಮಿ ಗೂ ಎತ್ತರವಾಗಿರುವ ಕಡೆಗಳಲ್ಲಿ ಸರಾಸರಿ ಉಷ್ಣತೆ-17.8ಲಿ ಸೆ. ಇಲ್ಲಿ ಚಳಿಗಾಲ ಹೆಚ್ಚು ಅವಧಿಯುಳ್ಳದ್ದು (ಅಕ್ಟೋಬರಿನಿಂದ ಏಪ್ರಿಲ್‍ವರೆಗೆ). ಆಗ ಉಷ್ಣತೆ 50ಲಿ ಸೆ. ಬೇಸಗೆಯ ಅವಧಿ ಕಡಿಮೆ. ಆಗ ಉಷ್ಣತೆ 20ಲಿ ಸೆ. ಗಿಂತ ಹೆಚ್ಚಾಗಿರುವುದಿಲ್ಲ. ಪಶ್ಚಿಮ ಪಾಮಿರ್ ಕಣಿವೆಗಳ ವಾಯುಗುಣ ಸ್ವಲ್ಪ ಹಿತಕರ. ಅಲ್ಲಿ ಜನವರಿಯ ಸರಾಸರಿ ಉಷ್ಣತೆ 22.5ಲಿ ಸೆ.

ಜನಜೀವನ : ಪಾಮಿರ್ ಪರ್ವತ ಪ್ರದೇಶದಲ್ಲಿ ಸುಮಾರು 1 ಲಕ್ಷ ಮಂದಿ ನೆಲೆಸಿದ್ದಾರೆ (1974). ಜನಸಾಂದ್ರತೆ ಚ.ಕಿಮೀಗೆ 2 ಕ್ಕಿಂತ ಕಡಿಮೆ. ಇಲ್ಲಿ ಸೇಕಡ 90 ಮಂದಿ ತಾಜಿಕ್ ಜನ. ಇವರು ಪಶ್ಚಿಮ ಪಾಮಿರ್‍ನಲ್ಲಿ ವಾಸವಾಗಿದ್ದಾರೆ. ಇವರು ಇರಾನಿ ಗುಂಪಿನ ಭಾಷೆ ಆಡುತ್ತಾರೆ. ಪೂರ್ವ ಪಾಮಿರ್‍ನಲ್ಲಿ ಕಿರ್ಗಿeóï ಜನರಿದ್ದಾರೆ. ಇವರ ಭಾಷೆ ತುರ್ಕಿ. ಇವರು ಸುನ್ನಿ ಮುಸ್ಲಿಮರು.

ಜನರ ಪ್ರಧಾನ ಕಸಬು ಬೇಸಾಯ ಹಾಗೂ ಕುರಿ ಸಾಕಣೆ. ಮುಖ್ಯ ಬೆಳೆ ಮೆಕ್ಕೆಜೋಳ, ಕಾಳುಗಳು ಹಾಗೂ ಆಲೂಗೆಡ್ಡೆ, ಕಲ್ಲಿದ್ದಲು ಮತ್ತು ಕಬ್ಬಿಣ ಅದುರಿನ ಗಣಿಗಳಿವೆ. ಪಾಮಿರ್ ಪ್ರದೇಶದಲ್ಲಿ ಚಿನ್ನ, ವಜ್ರ, ಕಾಗೆಬಂಗಾರಗಳೂ ದೊರಕುತ್ತವೆ.
ಸಸ್ಯಗಳು ಮತ್ತು ಪ್ರಾಣಿಗಳು : ಪಾಮಿರ್ ಪೂರ್ವಭಾಗದಲ್ಲಿ ಮರು ಭೂಮಿಯ ವಾತಾವರಣವಿದೆ. ಇಲ್ಲಿ ಸಸ್ಯರಹಿತ ಭಾಗಗಳೇ ಹೆಚ್ಚು. ಪಶ್ಚಿಮ ಪಾಮಿರ್‍ನಲ್ಲಿ ಸಸ್ಯಗಳಿವೆ. ನದಿಗಳು ಹರಿಯುವ ಕಣಿವೆಗಳಲ್ಲಿ ಮುಳ್ಳುಪೊದೆಗಳು, ವಿಲೊ, ಬರ್ಚೆ, ಪಾಪ್ಲರ್, ಬಾದಾಮಿ, ಜುನಿಪರ್ ಗಿಡಗಳಿವೆ. ನದಿಗಳ ಅಂಚಿನಲ್ಲಿ ಹುಲ್ಲುಗಾಡುಗಳಿವೆ. ಬೇಸಗೆಯಲ್ಲಿ ಕಾರಕಿರ್ಗಿಜ್ ಪ್ರಾಂತ್ಯದ ಅಲೆಮಾರಿಗಳು ಈ ಹುಲ್ಲುಗಾಡುಗಳಲ್ಲಿ ಕುರಿಗಳನ್ನು ಮೇಯಿಸುತ್ತಾರೆ. ಈ ಭಾಗದಲ್ಲಿ ದ್ರಾಕ್ಷಿ, ಆಪ್ರಿಕಾಟ್, ಸೇಬು, ಮರಸೇಬು, ವಾಲ್‍ನಟ್, ಉಪ್ಪುನೇರಿಳೆ ಬೆಳೆಯುತ್ತಾರೆ.

ಪಾಮಿರ್‍ನಲ್ಲಿ  ಪ್ರಾಣಿಗಳು ವಿರಳ. ಪೂರ್ವ ಪಾಮಿರ್‍ನಲ್ಲಿ ಬೆಟ್ಟದ ಕುರಿಗಳು, ಉದ್ದನೆಯ ಬಾಲದ ಮರ್‍ಮೊಟ್, ಉದ್ದನೆಯ ಕಿವಿಯ ತೋಳಗಳು ಇವೆ. ಪಕ್ಷಿಗಳಲ್ಲಿ ಮುಖ್ಯವಾದವು ಬೆಟ್ಟದ ತುರ್ಕಿಕೋಳಿ. ಕಾಗೆ, ಬಿಳಿಯ ರಣಹದ್ದು, ಪಶ್ಚಿಮ ಪಾಮಿರ್‍ನಲ್ಲಿ ಬೆಟ್ಟದ ಮೇಕೆ, ಕಂದುಕರಡಿ, ತೋಳ, ನರಿ, ಮಂಜಿನ ಚಿರತೆ,  ಲಿಂಕ್ಸ್, ತುಪ್ಪುಳು ಬೆಕ್ಕು, ಮೊಲ, ಹಾರುವ ಇಲಿ ಇವೆ. ಇಲ್ಲಿಯ ಪಕ್ಷಿಗಳ ಪೈಕಿ ಮುಖ್ಯವಾದವು ನೀಲಪಕ್ಷಿ, ಜೀವಂಜೀವ ಮತ್ತು ಪೊಟ್ಟರೆಯ ಗವುಜುಗ. ಇಲ್ಲಿಯ ನದಿ ಸರೋವರಗಳಲ್ಲಿ ಮೀನುಗಳ ಹೆಚ್ಚು ಬಗೆಗಳಿಲ್ಲ.

ಭೂಪರಿಶೋಧನೆ : 13ನೆಯ ಶತಮಾನದಲ್ಲಿ ವೆನಿಸ್ ಪ್ರವಾಸಿ ಮಾರ್ಕೊಪೋಲೋ ಪಾಮಿರ್ ಕಣಿವೆಗಳನ್ನು ದಾಟಿ ಟಿಬೆಟ್ ಮತ್ತು ಚೀನ ಕಡೆ ಸಂಚಾರ ಮಾಡಿದ. ಪಾಮಿರ್ ಪ್ರದೇಶದ ಆಧುನಿಕ ಭೂಪರಿಶೋಧನೆಗಳು 9ನೆಯ ಶತಮಾನದಲ್ಲಿ ಪ್ರಾರಂಭವಾದುವು. ಫೆಡ್‍ಜೆಂಕೊ 1871ರಲ್ಲಿ ಅಲೀ ಕಣಿವೆಯ ಮೂಲಕ ಪಾಮಿರ್ ಪರ್ವತಗಳ ಉತ್ತರ ತಪ್ಪಲುಗಳ ವರೆಗೆ ಸಂಚರಿಸಿದ. 1877ರಲ್ಲಿ ರಷ್ಯನ್ ಭೂವಿಜ್ಞಾನಿ ಮುಷ್‍ಕೆಟೊವ್ ಮುಕ್ಸು ನದಿ ಹಾಗೂ ಕಾರಕುಲ್ ಸರೋವರದ ವರೆಗೆ ಹೋಗಿ, 1877-78ರಲ್ಲಿ ಪಾಮಿರ್ ಪ್ರದೇಶದ ಭೂಪಟವನ್ನು ತಯಾರಿಸಿದ. ಪ್ರಾಣಿಶಾಸ್ತ್ರಜ್ಞ ಗ್ರುಮ್ ಗ್ರಿಜ್‍ಹ್ರೆಮೆಲೊ 1884ರಿಂದ 1887ರವರೆಗೆ ವಾಯವ್ಯ ಹಾಗೂ ನೈಋತ್ಯ ಪಾಮಿರ್ ಪ್ರದೇಶಗಳ ಬಗ್ಗೆ ವಿಷಯಗಳನ್ನು ಸಂಗ್ರಹಿಸಿದ. 1933ರಲ್ಲಿ ಫೆಡ್‍ಚೆಂಕೊ ಹಿಮನದಿಗಳ ವೀಕ್ಷಣೆಗಾಗಿ ಸಮುದ್ರಮಟ್ಟದಿಂದ 4,509 ಮೀ. ಎತ್ತರದಲ್ಲಿ ವೀಕ್ಷಕಶಾಲೆಯೊಂದನ್ನು ಕಟ್ಟಿಸಿದ. ರಷ್ಯನ್ ವಿಜ್ಞಾನಿಗಳ ಸರ್ವೇಕ್ಷಣೆಗಳಿಂದ ಹಾಗೂ ಲಿಟ್ಲ್‍ಡೇಲ್ ದಂಪತಿಗಳು, ಡಿ.ಜಿ.ಕ್ಯಾಪಸ್, ಫ್ರಾನ್ಸಿಸ್ ಯಂಗ್‍ಹಸ್ಬೆಂಡ್ ಮೊದಲಾದ ಭೂಪರಿಶೋಧಕರ ಪ್ರವಾಸಗಳಿಂದ ಪಾಮಿರ್ ಪ್ರದೇಶದ ಬಗ್ಗೆ ಅನೇಕ ಭೌಗೋಳಿಕ ವಿಷಯಗಳು ಸಂಗ್ರಹವಾಗಿವೆ.
ಸಾರಿಗೆ ಮತ್ತು ಸಂಪರ್ಕ : ಪಶ್ಚಿಮದ ದೂಷನ್ಬೆ ಪಟ್ಟಣದಿಂದ ದಕ್ಷಿಣದ ಖೊರೊಗ್ ಪಟ್ಟಣದವರೆಗೆ,  ಖೊರೊಗ್‍ನಿಂದ ಪೂರ್ವದಲ್ಲಿಯ ಓಷ್ ಪಟ್ಟಣಕ್ಕೆ ಮೋಟಾರು ರಸ್ತೆಗಳಿವೆ. ಹಿಂದೆ ದಾಟಲು ಅಸಾಧ್ಯವೆನಿಸಿದ್ದ ಪ್ಯಾನ್‍ಷ್, ಪಾಮಿರ್ ನದಿಗಳ ಕಮರಿಯ ಕಡೆ ಖೊರೊಗ್ ಪಟ್ಟಣದಿಂದ ಮತ್ತೊಂದು ರಸ್ತೆಯಿದೆ. ವಾಹನ ಸಂಚಾರ ದುಸ್ಸಾಧ್ಯವಾದ ಕಡೆ ಕಾಲುದಾರಿಗಳಲ್ಲಿ ಸಂಚಾರ ಸಾಗುತ್ತದೆ. ಅಲ್ಲಿ ಸರಕು ಸಾಗಿಸಲು ಹೇರು ಪ್ರಾಣಿಗಳನ್ನು ಬಳಸುತ್ತಾರೆ.
(ವಿ.ಜಿ.ಕೆ.;ಎಂ.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ